Tuesday, July 29, 2008
Tuesday, July 15, 2008
ಎಲ್ಲಿ ಜಾರಿತೋ ಮರಿಯೂ...
ಅತ್ತ ತಪ್ಪಿಸಿಕೊಂಡ ಮರಿ ಹೇನೂ ಅಮ್ಮನನ್ನು ನೆನೆಕೊಂಡು ಅಳುತ್ತಿರ ಬೇಕು.
ಯಾರಾದರೂ ಪುಣ್ಯಾತ್ಮರು ದಯವಿಟ್ಟು ಅಮ್ಮ-ಮಗುವನ್ನು ಒಂದು ಗೂಡಿಸಿ ಎಂಬ ಮನವಿಯೊಂದಿಗೆ....
ಎಲ್ಲಿ ಜಾರಿತೋ ಮರಿಯೂ
ಎಲ್ಲೆ ಮೀರಿತೋ
ಯಾವ ತಲೆಯಲಿ ಅಲೆಯುತಿಹುದೋ
ಏಕೆ ಕಾಣದಾಯಿತೋ
ದೂರದೊಂದು ತೀರದಿಂದ
ತೇಲಿಬಂದ ಆ ಹುಡುಗಿಯ ತಲೆಯಾ ಗಂಧ
ಯಾವ ಮಧುರ ನೆನಪಾ ಮೀಟಿ
ಮರಿ ಹೋಯಿತೆ ಬೇಲಿ ದಾಟಿ
ಯಾವುದೋ ತಲೆಯಲಿ ಒಂಟಿ(ಮರಿ) ಹೇನು
ಇನ್ಯಾವುದೋ ತಲೆಯಲಿ ಅಮ್ಮ ಹೇನು
ಕತ್ತಲಲ್ಲಿ ಇಬ್ಬರೂ ಕುಳಿತು
ಬಿಕ್ಕುತಿಹರು ಒಳಗೊಳಗೆ
ಹಿಂದೆ ಯಾವ ಜನ್ಮದಲ್ಲೋ
ನಾನು ಮಾಡಿದ ಪಾಪ ಫಲವೋ
ಬಾಚಣಿಗೆ ಮಾರಿಯಾಗಿ ಕಾಡಿ
ಕೊಂಡು ಹೋಯ್ತೆ ನನ್ನ ಮಗುವಾ
(ಭಟ್ಟರ ಕ್ಷಮೆ ಕೋರಿ)
Saturday, July 12, 2008
ಕೂದಲು ಉದುರುತ್ತಿದೆಯೇ...?
ಪ್ರತಿ ಯೊಬ್ಬ ವ್ಯಕ್ತಿಯ ದೇಹದ ಆರೋಗ್ಯ,ಊಟದ ಅಭ್ಯಾಸಗಳು,ಜೀವನಶೈಲಿ,ಶುಚಿತ್ವದ ಮಟ್ಟ ಇವೆಲ್ಲಾ ನೋಡಿಕೊಂಡು ಕೂದಲು "ಈ ತಲೆಯ ಮೇಲಿರಲೋ ಇಲ್ಲಾ ಜಾಗ ಖಾಲಿ ಮಾಡಲೋ" ಅಂತ ಡಿಸೈಡ್ ಮಾಡುತ್ತದಂತೆ.
ನಿಮ್ಮ ಕೂದಲು ಜಾಗ ಖಾಲಿ ಮಾಡಬಾರದೆಂದು ನೀವು ಬಯಸಿದರೆ ನೋಡಿ ಹುಷಾರಾಗಿ!
ಕೂದಲುದುರುವಿಕೆ ತಡೆಯಲು ಅಜ್ಜಿ ಹೇಳಿದ ಎಣ್ಣೆ ಉಪಯೋಗಿಸುವಿರಾದರೆ ಇಗೊಳ್ಳಿ ರೆಸಿಪಿ ಇಲ್ಲಿದೆ..
ಎರಡು ಎಸಳು ಕರಿಬೇವಿನ ಎಲೆ ಬಿಡಿಸಿ ತೊಳೆದುಕೊಳ್ಳಿ
ಎರಡು ಚಮಚ ಮೆಂತ್ಯದ ಪುಡಿ ಮಾಡಿಕೊಳ್ಳಿ
ಎರಡು ಎಸಳು ಬೆಳ್ಳುಳ್ಳಿ ಜಜ್ಜಿ ಕೊಳ್ಳಿ
ಎಲ್ಲವನ್ನು ಅರ್ಧ ಕಪ್ ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಿ ಕೊಳ್ಳಿ
ತಣ್ಣಗಾದ ಮೇಲೆ ಎಣ್ಣೆ ಸೋಸಿ ಬಾಟಲಲ್ಲಿ ಹಾಕಿ ಕೊಳ್ಳಿ
ವಾರಕ್ಕೆರಡು ಬಾರಿ ರಾತ್ರಿ ಈ ಎಣ್ಣೆ ತಲೆಗೆ ಹಚ್ಚಿಕೊಳ್ಳಿ
ಬೆಳಗ್ಗೆ ತಲೆ ತೊಳೆದು ಕೊಳ್ಳುವುದು ಮರೆಯಬೇಡಿ
ಮತ್ತು ಕೊಳ್ಳಿದೆವ್ವಕ್ಕೆ ಹೆದರಿಕೊಳ್ಳ ಬೇಡಿ
Friday, June 27, 2008
ಕಾಳಿದಾಸನ ಕಣ್ಣಲ್ಲಿ ' ಕೇಶ ವಿಲಾಸ'
ಅರಳಿದ ಮೊಲ್ಲೆಯ ಕರ್ಣಿಕೆ ಧರಿಸಿ
ಮುಡಿಗಿಟ್ಟರು ಕೇದಿಗೆ ಬಕುಲ
ಪರಊರವರೆದೆ ಮಿದ್ದರು ಗೆದ್ದರು
ಹೆಣ್ಣುಗಳವರನು ಅನಾಕುಲ (ವರ್ಷ ಋತು-ಪದ್ಯ20)
ಹೊಳೆವ ಮೀನೇ ಡಾಬು,ದಡದ ಬೆಳ್ಳಕ್ಕಿಯ ಸಾಲೇ ಹಾರ
ಹೊಳೆಯ ಮರಳುದಿಣ್ಣೆಗಳೇ ಜಾರುಜಘನವು
ಇಂಥ ನದಿಗಳೀಗ ರಸಿಕರೆದೆಗಳನು 'ಜುಂ'ಎನ್ನಿಸಿ
ಹಂಸ ನಡೆಯ,ತೂಗುಜಡೆಯ,ಹುಡುಗಿ ಹಾಗಿವೆ; (ಶರತ್ ಋತು-ಪದ್ಯ3)
ನಿಬಿಡವಾದ ನೀಳವಾದ ನೀಲ ಕೇಶರಾಶಿಯಲ್ಲಿ
ಬೆಳ್ಳಗಿರುವ ಜಾಜಿ ಹೂವ ಮುಡಿದು ಹೆಂಗಳು,
ಕಿವಿಗಳಲ್ಲಿ ಚಿನ್ನದೋಲೆಯಿರಿಸಿ,ನೀಲಿ ಕಮಲವನ್ನು
ಕಿವಿಯ ಹಿಂದೆ ಇಣುಕುವಂತೆ ಮುಡಿದುಕೊಂಡರು (ಶರತ್ ಋತು-ಪದ್ಯ19)
ಕೃಷ್ಣಾಗರು ಧೂಪವಿಟ್ಟು ಒಣಗಿಸಿ ಮುಡಿಯನ್ನು
ತೆಳ್ಳಗೆ ಬಳುಕುವ ದೇಹಕ್ಕೆ ಸವರಿ ಗಂಧವನ್ನು
ಚಿಗುರೆಲೆಗಳ ಇರಿಸಿ ಕಮಲ ಮುಖವನು ಸಿಂಗರಿಸಿ
ಸಜ್ಜೆಗೆ ಬಂದರು ಹೆಂಗಳು ಸುರತೋತ್ಸವ ಬಯಸಿ (ಹೇಮಂತ ಋತು-ಪದ್ಯ5)
ಕಾಳಿದಾಸನ ಋತುಸಂಹಾರವನ್ನು ಹೆಚ್.ಎಸ್.ವೆಂಕಟೇಶಮೂರ್ತಿಯವರು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ
ಹೆಚ್ಚೆಸ್ವಿಯವರ 'ಋತುವಿಲಾಸ' ದಿಂದ ಮೇಲಿನ ಪದ್ಯಗಳನ್ನು ಆಯ್ದಿದ್ದೇನೆ
ಚೆಂಗುಲಾಬಿಯ ನಡುವೆ ನಾನಿನ್ನ ಕಂಡೆ
ನಿನ್ನ ಮುಡಿಯೊಳಿತ್ತು ಮಲ್ಲಿಗೆಯ ದಂಡೆ
ಎಂದು ಹಾಡಿದ ಕೆ.ಎಸ್ .ನ. ಇಲ್ಲಿದಾರೆ
Saturday, June 21, 2008
ಬೈತಲೆ ಬೊಟ್ಟು
ಒಡವೆಗಳಿಗೆಲ್ಲಾ ಮತ್ತೆ ಗಾಳಿ ಬೆಳಕು ನೋಡುವ ಅವಕಾಶ ಪ್ರಾಪ್ತವಾಗುತ್ತಿದೆ
ಟಿವಿ ಯಲ್ಲಿ ಬರುವ ' ಕೆ ' ಅಕ್ಷರದ ಸೀರಿಯಲ್ ಗಳ ಪ್ರಭಾವವೋ ಅಥ್ವಾ ಕನ್ನಡದವರು ಒಂದಿಷ್ಟೂ ಮೂಲದಿಂದ ಬದಲಾಯಿಸದೆ ತೆಲುಗಿನಿಂದ ತರುವ ಸಿನಿಮಾಗಳ ಪ್ರಭಾವ ಇದಕ್ಕೆ ಕಾರಣವೋ ಹೇಳುವುದು ಕಷ್ಟ ಜೊತೆಗೆ ನಮ್ಮ ಹೆಪ್ ಹುಡುಗಿಯರಿಗೂ ಇತ್ತೀಚೆಗೆ ಆಗಾಗ ಟ್ರಡಿಶನಲ್ಲಾಗಿ ಅಲಂಕರಿಸಿಕೊಳ್ಳುವ ಆಸೆಯಾಗುತ್ತಿದೆ....
ಒಟ್ಟಿನಲ್ಲಿ ಬೈತಲೆ ಬೊಟ್ಟು ಅದೃಷ್ಟಶಾಲಿ...!
**************
ಭಾರತೀಯರ ನಂಬಿಕೆ ಪ್ರಕಾರ ನಮ್ಮ ದೇಹದ ಏಳು ಚಕ್ರಗಳಲ್ಲಿ ಉನ್ನತವಾದ ಚಕ್ರಗಳು ಆಜ್ಞಾ ಮತ್ತು ಸಹಸ್ರಾರ ಚಕ್ರಗಳಾಗಿವೆ.ಆಜ್ಞಾ ಹಣೆಯ ಮಧ್ಯದಲ್ಲಿದ್ದರೆ ಸಹಸ್ರಾರ ನೆತ್ತಿಯಲ್ಲಿದೆ
ಭಾರತೀಯರು ಹಣೆಯಲ್ಲಿ ಕುಂಕುಮ ಇಡುವುದು ಆಜ್ಞಾ ಚಕ್ರದ ಸಂಕೇತವೆಂದೂ, ಶಿವನ ಮೂರನೇ ಕಣ್ಣಿನ
ಶಕ್ತಿಯನ್ನು ನೆನಪಿಸಲೆಂದೂ ಹೇಳಲಾಗುತ್ತದೆ
ಹಾಗೇ ಮಹಿಳೆಯರು ಬೈತಲೆ ಬೊಟ್ಟು ಅಥವಾ ಮಾಂಗ್ ಟೀಕಾ ಧರಿಸುವುದು ಈ ಎರಡೂ ಚಕ್ರಗಳ ನಡುವಿನ ಕೊಂಡಿಯನ್ನು ಸೂಚಿಸಲು ಎಂದು ಎಲ್ಲೋ ಓದಿದ ನೆನಪು
ಬೈತಲೆ ಬೊಟ್ಟಿಗೆ ಕಷ್ಕಾ ಎಂದೂ ಕರೆಯುತ್ತಾರೆ.ಅಂದ ಹಾಗೆ ಕಷ್ಕಾ ಉಜ್ಬೆಕಿಸ್ತಾನದ ನದಿಯೊಂದರ ಹೆಸರೂ ಕೂಡ.
ಚಿತ್ರ ಕೃಪೆ-ಬ್ರೈಡಲ್ ಜ್ಯೂವೆಲ್ಸ್ ಆಪ್ ಇಂಡಿಯಾ
Friday, June 13, 2008
ತಲೆ ಹೊಟ್ಟು:ಪಶ್ಚಿಮದವರ ಉಪಾಯಗಳು
ಅವುಗಳು ಹೀಗೆ...
1.ಅರ್ಧ ಕಪ್ ಲಿಸ್ಟರಿನ್ ಮೌತ್ ವಾಶ್ (Listerine mouthwash) ಒಂದು ಮಗ್ ನೀರಿನಲ್ಲಿ ಹಾಕಿ ಅದರಿಂದ ತಲೆ ತೊಳೆಯುವುದು
2.ಬೇಕಿಂಗ್ ಸೋಡ ಪುಡೀಯನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ತಲೆ ಗಲಬರಿಸುವುದು
3.ಬೇಬಿ ಆಯಿಲ್ ತಲೆಗೆ ಹಚ್ಚುವುದು
4.ರಬ್ಬಿಂಗ್ ಅಲ್ಕೋಹಾಲ್ ಅನ್ನು (rubbing alcohol) ಹತ್ತಿಯಿಂದ ತಲೆ ಬುರುಡೆಗೆ ಹಚ್ಚುವುದು
5.ಮೂರು ಟೀಸ್ಪೂನ್ ವಿನೆಗರ್ ಅನ್ನು ಒಂದು ಮಗ್ ನೀರಿನಲ್ಲಿ ಬೆರೆಸಿ ತಲೆ ತೊಳೆಯುವುದು
ನೀವು ಟ್ರೈ ನೋಡುವಿರಾದರೆ ಈ ಉಪಾಯಗಳು ಎಷ್ಟು ಪರಿಣಾಮಕಾರಿ ಅಂತ ನನಗೂ ತಿಳಿಸಿ
Monday, June 2, 2008
ಕಾರ್ಮುಗಿಲ ಮಾಲೆ
ಕಂಡವರಿಗೆ ?
ಪಡೆದ ಚೆಲುವಿಗೆ ತಕ್ಕ ಘನತೆ ಉಂಟೇನೆ
ಕೊಂಡವರಿಗೆ ?
ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದಾ
ಪರಿಮಳವನು,
ಹೂ ಗುಲಾಬಿಗೆ ಕೊಟ್ಟೆ ನಿನ್ನ ಕೆನ್ನೆಯ
ಹೊನ್ನಸಂಜೆಯನ್ನು,
ಪುಟ್ಟ ಕನಕಾಂಬರಿಗೆ ಮೈಯೆಲ್ಲ ಸವರಿದೆ
ತುಟಿಯ ರಂಗು,
ನಿನ್ನ ಸಂಪತ್ತನ್ನು ತೂರುವುದೆ ಹೀಗೆ
ಏನು ದುಂದು ?
ನಿನ್ನೆದೆಯ ಸವಿಜೇನು ತುಂಬಿ ತುಳುಕಿದೆ
ಮಾವು-ಕಿತ್ತಳೆಯಲಿ.
ಥಣ್ಣನೆಯ ರಾತ್ರಿಯಲಿ ನಿನ್ನ ಕಣ್ಣಿನ ಕಾಂತಿ
ಚಿಕ್ಕೆಯಲ್ಲಿ,
ನಿನ್ನ ಹೆರಳಿನ ಕಪ್ಪು ಮಿಂಚುತಿದೆ
ಕಾರ್ಮುಗಿಲಮಾಲೆಯಲ್ಲಿ
ನಿನ್ನ ಕಾಣಿಕೆ ಹೊರತು ಏನಿದೆಯೆ ಸಂಪತ್ತು
ಪ್ರಕೃತಿಯಲ್ಲಿ ?
-ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ.