Wednesday, May 28, 2008

ಅಜ್ಜಿಯ ಉಪಾಯಗಳು-2

ಸೊಂಪಾದ ಕೂದಲಿಗೆ ಅಜ್ಜಿ ಹೇಳುವ ಇತರ ಉಪಾಯಗಳು ಹೀಗೆ...

1.ಎಳ್ಳೆಣ್ಣೆಯನ್ನು ಉಗುರು ಬೆಚ್ಚಗೆ ಕಾಯಿಸಿ ತಲೆಗೆ ತಿಕ್ಕಿ ಸ್ನಾನ ಮಾಡುವುದು

2.ಕೊತ್ತಂಬರಿ ಸೊಪ್ಪಿನ ರಸವನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದು
3.ಸೌತೇಕಾಯಿ ರಸವನ್ನು ಬುರುಡೆಗೆ ಉಜ್ಜುವುದು

4.ಉದ್ದಿನ ಬೇಳೆ ಮೂರು ಚಮಚ ಮೆಂತ್ಯದಕಾಳು ಒಂದು ಚಮಚ ನೀರಲ್ಲಿ ನೆನೆಸಿ ರುಬ್ಬಿ ತಲೆಗೆ ಹಚ್ಚುವುದು

5.ಚೆಂಡುಹೂವಿನ(Marigold) ಪೇಸ್ಟ್ ತಲೆಗೆ ಹಚ್ಚಿ ಸ್ನಾನ ಮಾಡುವುದು

Tuesday, May 20, 2008

ಎಲ್ಲೆಲ್ಲಿ ನೋಡಲೀ...

ಜನಪ್ರಿಯ ಸಿನಿಮಾ ಯುಗಳ ಗೀತೆಯೊಂದನ್ನು ಹೇನು ದಂಪತಿಗಳು ಹಾಡುತ್ತಿದ್ದದ್ದು ಹೀಗೆ...
(ಇವುಗಳಲ್ಲಿ ಕೆಲವು ಸಾಲುಗಳು ದಂಪತಿಗಳು ಒಬ್ಬರಿಗೊಬ್ಬರು ಪ್ರೇಮದಿಂದ ಹಾಡಿಕೊಳ್ಳುತ್ತಿದ್ದುದು ಒಂದೆರಡು ಸಾಲುಗಳನ್ನು
ಸದರಿ ತಲೆಯ ಒಡೆಯ/ಒಡತಿಯ ಮೇಲಿನ ಪ್ರೀತಿಯಿಂದ ಹಾಡಿದ್ದು ಅವು ಯಾವ್ಯಾವ ಸಾಲುಗಳೆಂದು "ಅನುಭವಸ್ಥ"ರಾದ ನಿಮಗೆ ನಾನು ಬಿಡಿಸಿ ಹೇಳಬೇಕಾದ್ದಿಲ್ಲ ಎಂದು ನಂಬಲೇ...?)


ಎಲ್ಲೆಲ್ಲಿ ನೋಡಲೀ ಹೇನ್ ಮರಿಯ ಕಾಣುವೇ
ಕೂದ್ಲಲ್ಲಿ ತುಂಬಿರುವೆ ಜಡೆಯಲಿ/ಕ್ರಾಪಲಿ ಮನೆ ಮಾಡಿ ಆಡುವೆ

ಆ ಗುಂಗ್ ರು ಕೂದ್ಲಿಗೆ ನೀನೀಗ ಹೋದರೆ
ನಾನಂತು ಈ ಮೋಟ್ ಜಡೆಯ ಕಾಡುವೆ
ಮಿಂಚೆಂಬ ಬಳ್ಳಿಗೆ ಮೇಘದ ಆಸರೆ
ಈ ಹೇನ ಬಾಳಿಗೆ ಈ ತಲೆಯ ಆಸರೆ
ಕೇಶಗಳು ಜಾರಿ ಉದುರಿದರೇನು
ನಾನು ನೀನು ನಮ್ ಪುಟ್ಫುಟ್ ಹೇನು
ಈ ತಲೆಯ ಸೇರಿದ್ಮೇಲೆ ಬೇರೆ ಏನಿದೆ


ತಲೆಯನ್ನು ಕಚ್ಚದೇ ಹಗಲೆಂದು ಆಗದೂ
ನೆತ್ತರ ಕುಡಿಯದೇ ಈ ಪ್ರಾಣ ನಿಲ್ಲದು
ತಲೆ -ತಲೆಯ ಹಾರದ ಹೇನೆಲ್ಲಿ ಕಾಣುವೇ
ಬುರಡೆಯನ್ನು ಕಚ್ಚದೇ ನಾ ಹೇಗೆ ಬಾಳುವೇ
ಬಾಚಣಿಗೆ ನೋವ ಮರೆಯಲಿ ಜೀವ
ದುಂಬಿ ಹೂವ ಕಚ್ಚುವಂತೆ
ಪ್ರೇಮದಿಂದ ನಿನ್ನ ಕಚ್ಚುವೇ

Saturday, May 17, 2008

ಸುಪ್ತದೀಪ್ತಿ ಪದ್ಯ

ನನ್ನ ಹಿಂದಿನ ಪೋಸ್ಟ್ ಗೆ ಕಮೆಂಟ್ಸ್ ರೂಪವಾಗಿ ಸುಪ್ತದೀಪ್ತಿ ಬರೆದ ಈ ಪದ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣವೆನಿಸಿತು

ಎಣ್ಣೆಣ್ಣೆ ಬುರುಡೆಗೊಂದು ಪಥ್ಯ-
ಒಣಕಲು ಕರಟಕ್ಕೊಂದು ಲೇಪ-
ಮೋಟು ಬಾಲಕ್ಕೊಂದು ರೀತಿ-
ಮಾರುದ್ದ ಜಡೆಗೊಂದು ನೀತಿ-

ಹೀಗೆಲ್ಲ ಕೆಟಗರೈಸ್ ಮಾಡೋದಲ್ವೆ!?

ನನ್ನ ಉತ್ತರ
ಖಂಡಿತಾ ಮಾಡಲಾಗುತ್ತೆ ಮೊದಲೆರಡು ಪೋಸ್ಟ್ ಗ ಳಲ್ಲೇ ಅಷ್ಟೆಲ್ಲಾ ಕನ್ಫ್ಯೂಶನ್ ಮಾಡಿಸಿಬಿಟ್ಟರೆ ನನ್ನ ಓದುಗರೆಲ್ಲಿ ಹೆದರಿ ಮೊಗ್ಗಿನ ಜಡೆಗೆ ಬರುವುದು ಬಿಟ್ಟು ಬಿಡುವರೋ ಎಂಬ ಭೀತಿಯಿಂದ ಮಾಡಲಿಲ್ಲ ಅಷ್ಟೇ...

Monday, May 12, 2008

ತಲೆಹೊಟ್ಟೇ...?

ತಲೆ ಹೊಟ್ಟಿನ ನಿವಾರಣೆಗೆ ಕೆಲವು ಉಪಾಯಗಳು ಹೀಗೆ...

1.ಹೆಸರು ಕಾಳಿನ ಹಿಟ್ಟನ್ನು ಮೊಸರಿನಲ್ಲಿ ಕಲೆಸಿ ಪೇಸ್ಟ್ ಮಾಡಿ ತಲೆ ಬುರುಡೆಗೆ ಹಚ್ಚುವುದು

2.ನೆಲ್ಲಿಕಾಯಿ ರಸ, ನಿಂಬೆರಸ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚುವುದು

3.ಮೆಂತ್ಯ ಕಾಳನ್ನು ಏಳೆಂಟು ಗಂಟೆ ನೀರಲ್ಲಿ ನೆನೆಸಿ ರುಬ್ಬಿ ತಲೆಗೆ ಹಚ್ಚುವುದು

4.ಈರುಳ್ಳಿ ರಸ/ಪೇಸ್ಟ್ ತಲೆ ಬುರುಡೆಗೆ ಹಚ್ಚುವುದು

5.ಹುಳಿಮೊಸರು ನಿಂಬೆ ರಸ ಬೆರೆಸಿ ಹಚ್ಚುವುದು

ವಿಶೇಷ ಸೂಚನೆ-ಮೇಲಿನ ವಿಧಿಗಳಲ್ಲೊಂದನ್ನು ಅನುಸರಿಸಿದ ಮೇಲೆ ಚೆನ್ನಾಗಿ ತಲೆ ತೊಳೆದು ಕೊಳ್ಳುವುದು ನಿಮಗೂ ನಿಮ್ಮ ಮನೆಯಲ್ಲಿ ಇರುವ ಇತರರಿಗೂ ಕ್ಷೇಮ

Friday, May 9, 2008

ಹೀಗೊಂದು ವಚನ...!

ತಲೆಯ ಕೂದಲು ಬೆಳೆಸಿ

ತಲೆಹೊಟ್ಟಿಗೆ ಅಂಜಿದೊಡೆಂತಯ್ಯ

ಕ್ರಾಪನ್ನು ತಿದ್ದಿ ಹಗುರಿಗೆ ಹಾಯಿ ಹಾಯಿ

ಎಂದು ಹಲುಬಿದೊಡೆಂತಯ್ಯ

ಜುಟ್ಟ ಬಿಟ್ಟ ಮನುಜರೆಲ್ಲ ಕೇಳಿರಯ್ಯ

ಕೂದಲ ಕೊಟ್ಟ ದೇವನು

ತಲೆ ಹೊಟ್ಟನ್ನೂ ಕೊಟ್ಟಿಹನು

ಅದ ಪರಿಹರಿಸುವ ಉಪಾಯವ

ಹುಡುಕದೇ ಬೇರೆ ದಾರಿ ಇಲ್ಲವಯ್ಯ

ನಿರೀಕ್ಷಿಸಿ!!! ತಲೆಹೊಟ್ಟು ನಿವಾರಣೆಗೆ ಉಪಾಯಗಳು

Thursday, May 8, 2008

ಕಲ್ಪನಾ ಸುಂದರಿ

ನಮ್ಮ ಕವಿಗಳು ಉಪಮಾಶೂರರು. ನಿಸರ್ಗದ ನೀರೆಯರ ವರ್ಣನೆಯಲ್ಲಿ ಅವರದು ಎತ್ತಿದ ಕೈ ಅದರಲ್ಲೂ ಸೊಬಗಿನಿಂದ ಬೆಳಗುವ ಕೇಶರಾಶಿ ಅವರ ಕಣ್ ಸೆಳೆಯದೇ ಇದ್ದೀತೇ?ತಮ್ಮ ಕಾವ್ಯದಲ್ಲಿ ಮಾನಿನಿಯರ ಸಿರಿಮುಡಿಯನ್ನು ಬಣ್ಣಿಸಿಯೇ ಬಣ್ಣಿಸಿದರು

ಉಹುಂ...ಅಷ್ಟೇ ಹೇಳಿದರೆ ಸರಿಯಾಗದು
ಬಣ್ಣಿಸುತ್ತಿದ್ದರು... ಬಣ್ಣಿಸುತ್ತಿದ್ದಾರೆ ...ಬಣ್ಣಿಸುತ್ತಲೇ ಇರುತ್ತಿರುತ್ತಾರೆ...!

ಅಂಥಾ ಒಂದು ಸ್ಯಾಂಪಲ್ ಇಲ್ಲಿದೆ

ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು ನನ್ನ ಸೆಳೆದಳು

ಅಡಿಯ ಮಟ್ಟ ನೀಳ ಜಡೆ
ಮುಡಿಯ ತುಂಬ ಹೂವ ಹೆಡೆ
ಇವಳು ಅಡಿಯನಿಟ್ಟ ಕಡೆ
ಹೆಜ್ಜೆ ಹೆಜ್ಜೆಗೆ ಒಂದುದೊಡ್ಡ ಮಲ್ಲಿಗೆ

ಅಂಗಾಲಿನ ಸಂಜೆಗೆಂಪು
ಕಾಲಂದುಗೆ ಗೆಜ್ಜೆಇಂಪು
ಮೋಹದ ಮಲ್ಲಿಗೆಯ ಕಂಪು
ಕರೆದುವೆನ್ನನು ನಾನುಹಿಡಿಯ ಹೋದೆನು....

-ಕೆ.ಎಸ್.ನ

Wednesday, May 7, 2008

ಅಜ್ಜಿಯ ಐದು ಉಪಾಯಗಳು

ಸೊಂಪಾದ ಕೂದಲಿಗಾಗಿ ಅಜ್ಜಿಯ ಉಪಾಯಗಳು ಹೀಗೆ...

೧.ನಿಂಬೆ ಹಣ್ಣಿನರಸವನ್ನು ಒಳ್ಳೇ ಕೊಬ್ಬರಿ ಎಣ್ಣೆಯಲ್ಲಿ ಸೇರಿಸಿ ತಲೆಬುರುಡೆಗೆ ಮೃದುವಾಗಿ ತಿಕ್ಕಿ ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡುವುದು

೨.ವೀಳ್ಯದೆಲೆಯನ್ನು ರುಬ್ಬಿ(ಐ ಮೀನ್ ಮಿಕ್ಸಿಯಲ್ಲಿ) ಕೊ.ಎ............

೩.ಮೆಂತ್ಯವನ್ನು ನೀರಲ್ಲಿ ನೆನೆಹಾಕಿ ನುಣ್ಣಗೆ ರುಬ್ಬಿ ತಲೆಗೆ ಹಚ್ಚಿ ಕೊಂಡು ಸ್ನಾನ ಮಾಡುವುದು

೪.ನನ್ನ ತರ ಶೀತದ ಪ್ರಾಣಿಗಳು ನಾನು ಮಾಡುತ್ತಿದ್ದ ಹಾಗೆ ಮೆಂತ್ಯಸೊಪ್ಪಿನ ಪೇಸ್ಟ್ ಬಳಸಬಹುದು

೫.ಕಾಯಿ ಹಾಲನ್ನು ತಲೆಗೆ ಹಚ್ಚಿ ಕೊಂಡು ಸ್ನಾನ ಮಾಡುವುದು

(ನಮ್ಮನೆಯಲ್ಲಿ ಅಮ್ಮ ಕಾಯಿ ಒಡೆದಾಗ ಅದು ಸ್ವಲ್ಪ ಅಡ್ಡವಾಸನೆ ಇದ್ದರೆ ಅಷ್ಟೇ...ರಿಜೆಕ್ಟೆಡ್...!
ಇಂಥಾ ರಿಜೆಕ್ಟೆಡ್ಡ್ ಕಾಯಿಗಾಗಿ ನಾನೂ ನನ್ನ ತಂಗಿಯೂ ಪೈಪೋಟಿ ಮೇಲೆ ಕಾಯುತ್ತಿರುತ್ತಿದ್ದೆವು
ಅಜ್ಜಿ ಹೇಳಿದ ಕೊನೆ ಉಪಾಯ ಕಾರ್ಯಗತ ಮಾಡಲು ಬೇಕಾದ ರಾ ಮೆಟೀರಿಯಲ್ಲಿಗಾಗಿ...!)

Monday, May 5, 2008

ಮೊಗ್ಗಿನ ಜಡೆ

ಮೊನ್ನೆ ಸ್ಯಾನ್ ಹೋಸೆ ಲೈಬ್ರರಿಯಿಂದ ಪುಸ್ತಕದ ಹೊರೆ ಹೊತ್ತು ಹೊರ ಬಂದೆ ಇನ್ನೇನು ಲಿಫ್ಟ್ ಬಾಗಿಲು ಹಾಕಿಕೊಳ್ಳುತ್ತೆ ಅಷ್ಟರಲ್ಲಿ ಓಡಿ ಒಳಗೆ ನುಗ್ಗಿ ಬಿಡೋಣವೆಂದು ಓಡುತ್ತಿರುವಾಗ ಸೆಕ್ಯೂರಿಟಿಯ ವೇಷ ತೊಟ್ಟಿದ್ದ ಹೆಂಗಸೊಬ್ಬಳು ದೂರದಿಂದ
ಅವಸರವರವಾಗಿ ನನ್ನೆಡೇಗೆ ಬರುತ್ತಾ ನಿಲ್ಲೆಂದು ಕೈತೋರಿಸಿದಳು ನಾನೇನು ತಪ್ಪು ಮಾಡಿದೆನಪ್ಪಾ ಅಂತ ಗಾಭರಿಯಿಂದ
ನಿಂತೆ.ಆ ದಢೂತಿ ನನ್ನೆಡೆಗೆ ಬಂದು ಇಂಡಿಯನ್..?ಅಂತ ಕೇಳಿದಳು ಹೌದೆಂದು ಗೋಣು ಅಲ್ಲಾಡಿಸಿದೆ ಇವಳು ಮೆಕ್ಸಿಕನ್ನಾ ಅಥ್ವಾ ಇಂಡಿಯನ್ನೇ ಇರಬಹುದಾ..?ಮನದಲ್ಲೇ ಯೋಚಿಸುತ್ತಾ.

ಹಿಂದಿ ಬೋಲ್ತೇಹೋ..?ಕೇಳಿದಳು
'ತೋಡಾ ಸಾ..' ಅಂದೆ
ತುಮಾರಾ ಬಾಲ್ ಬಹುತ್ ಅಛ್ಛಾ ಹೇ..ಅಸ್ಲೀ ಹೇ..?

ನಾನು ಉಸ್ಸೆಂದು ಉಸಿರು ಬಿಟ್ಟೆ!

ತಲೆ ಮೇಲೆ ಕೆಳಗೆ ಆಡಿಸಿದೆ
ಇಸೆ ಕಾಟ್ ನಾ ಮತ್...'ಅಂತ ಹೇಳುತ್ತಾ ಸ್ನೇಹದ ನಗೆಬೀರಿ ಅವಳು ಅಲ್ಲಿಂದ ನಿರ್ಗಮಿಸಿದಳು
******************
ಇವತ್ತು ತಲೆ ಬಾಚಿಕೊಳ್ಳುತ್ತಾ ಆಹಾ ನನ್ನ ಸ್ಟೂಡೆಂಟ್ ಡೇಸ್ ನಲ್ಲಿ ನನ್ನ ಹೇರ್‍ ಕೇರ್ ಸಾಹಸಗಳು... ನೆನಪಿಗೆ ಬಂದವು
ಅವನ್ನೆಲ್ಲ ನಿಮ್ಮೊಂದಿಗೆ ಯಾಕೆ ಹಂಚಿಕೊಳ್ಳಬಾರದು ಅನ್ನಿಸಿತು
ಹೀಗೆ ಹುಟ್ಟಿದ್ದೇ ಈ "ಮೊಗ್ಗಿನ ಜಡೆ"