Monday, June 2, 2008

ಕಾರ್ಮುಗಿಲ ಮಾಲೆ

ನಿನ್ನ ಚೆಲುವನ್ನೆಲ್ಲ ಹೀಗೆ ಹಂಚುವುದೇನೆ
ಕಂಡವರಿಗೆ ?
ಪಡೆದ ಚೆಲುವಿಗೆ ತಕ್ಕ ಘನತೆ ಉಂಟೇನೆ
ಕೊಂಡವರಿಗೆ ?
ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದಾ
ಪರಿಮಳವನು,
ಹೂ ಗುಲಾಬಿಗೆ ಕೊಟ್ಟೆ ನಿನ್ನ ಕೆನ್ನೆಯ
ಹೊನ್ನಸಂಜೆಯನ್ನು,
ಪುಟ್ಟ ಕನಕಾಂಬರಿಗೆ ಮೈಯೆಲ್ಲ ಸವರಿದೆ
ತುಟಿಯ ರಂಗು,
ನಿನ್ನ ಸಂಪತ್ತನ್ನು ತೂರುವುದೆ ಹೀಗೆ
ಏನು ದುಂದು ?
ನಿನ್ನೆದೆಯ ಸವಿಜೇನು ತುಂಬಿ ತುಳುಕಿದೆ
ಮಾವು-ಕಿತ್ತಳೆಯಲಿ.
ಥಣ್ಣನೆಯ ರಾತ್ರಿಯಲಿ ನಿನ್ನ ಕಣ್ಣಿನ ಕಾಂತಿ
ಚಿಕ್ಕೆಯಲ್ಲಿ,
ನಿನ್ನ ಹೆರಳಿನ ಕಪ್ಪು ಮಿಂಚುತಿದೆ
ಕಾರ್ಮುಗಿಲಮಾಲೆಯಲ್ಲಿ
ನಿನ್ನ ಕಾಣಿಕೆ ಹೊರತು ಏನಿದೆಯೆ ಸಂಪತ್ತು
ಪ್ರಕೃತಿಯಲ್ಲಿ ?

-ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ.

3 comments:

sunaath said...

ಲಕ್ಷ್ಮೀನಾರಾಯಣ ಭಟ್ಟರಿಗೇಕೆ ಹೊಟ್ಟೆಕಿಚ್ಚು?

ಕುಕೂಊ.. said...

ನನ್ನ ಕವಿ ಕಲ್ಪನೆಯ ಮುಗಿಲಿನಲ್ಲಿ ಅರಳಿದ ಸಾಲುಗಳು

** ಅರಳಿ ಬಿಡು ಮಲ್ಲೆ ಹೂವೆ **

ಅರಳಿ ಬಿಡು ಮಲ್ಲೆ ಹೂವೆ!
ನನ ಗೆಳತಿ ನಗುವ ಮೊದಲು
ನಿನ್ನ ಸೊಬಗು ಉಳಿವುದೆಲ್ಲಿ?
ಅವಳ ನಗುವಿನ ತೆರೆಯಲ್ಲಿ

ಸೂಸು ಕಿರಣ ಬೇಗ ನಿತ್ಯನೆ!
ಅವಳು ಕಣ್ಣು ತೆರೆವ ಮೊದಲು
ಮಾಸುವುದು ನಿನ್ನ ಹೊಳಪು
ಅವಳ ಕಣ್ಣ ಹೊಳಪಿನಲ್ಲಿ

ನಾಟ್ಯವಾಡಿಬಿಡು ಗಿರಿನವಿಲೆ!
ನನ್ನ ಸ್ನೇಹ ಸಂಗಾತಿ ನಡೆವ ಮೊದಲು
ನಿನ್ನ ನಡೆಯ ಮೋಹಕವೆಲ್ಲಿ?
ಅವಳ ನಡೆಯ ಕಂಡಮೇಲೆ

ಹಾಡಿಬಿಡು ಸಿರಿಕಂಠ ಕೋಗಿಲೆ!
ಅವಳು ಮಾತನಾಡುವ ಮೊದಲು
ಎಲ್ಲಿ ನಿನ್ನ ಕಂಠ ಸಿರಿಯು?
ಅವಳ ಮಾತು ಕೇಳಿದ ಕಿವಿಗೆ

ಮುಡಿಗೇರಿ ಬಿಡು ಓ ಗುಲಾಬಿಯೆ!
ಅವಳು ಸಿಡುಕಿ ಹೋಗುವ ಮೊದಲು
ಮುಕ್ತಿ ಹರಹುವೆಲ್ಲಿ ನೀನು?
ಅವಳ ಮುಡಿಯ ಬಿಟ್ಟು

ಚಾಮರವ ಬೀಸು ಗರಿಯೆ!
ಅವಳ ಮುಂಗುರುಳು ತೂಗುವ ಮೊದಲು
ಸೊಗಸು ಎಲ್ಲಿ ನಿನ್ನ ಚಾಮರಕೆ?
ಅವಳ ಮುಂಗುರುಳ ತಳಿಕಿದ ಮೇಲೆ

ಕಂಪಸೂಸು ಓ ಕೆಂಡ ಸಂಪಿಗೆ!
ಅವಳು ದೂರ ಹೊಗುವ ಮೊದಲು
ಅವಳ ಸ್ಪರ್ಶ ಇರದ ಕಂಪಿಗೆ
ಪರಿಪುರ್ಣ ಪರಿಮಳ ಹೇಗೆ ಆಗುವುದು?

**ಕುಕೂಊ....

Dr. Shylaja Ramesh said...

ಅರಳಿ ಬಿಡು ಮಲ್ಲೇ
ಚಂದದ ಕವಿತೆ